dasara padagalu · MADHWA · purandara dasaru

Bandaddella barali govindana

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ||pa||

ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ||a.pa||

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಘೋರ ದುರಿತ ಬಯಲಾದುದಿಲ್ಲವೆ?||1||

ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗಲಿಲ್ಲವೆ?||2||

ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು-
ಭಾಂಗನ ದಯವೊಂದಿದ್ದರೆ ಸಾಲದೆ||3||
Bandaddella barali govindana daya namagirali||pa||

Indire ramanana dhyanava madalu
Banda durita bayaladudillave||a.pa||

Aragina maneyolagandu pandavaranu kolabekendu
Durula kaurava bandu ati harushadalirutiralandu
Hari krupe avarallidda karana banda
Gora durita bayaladudillave?||1||

Aru oliyadiralenna murari enage prasanna
Horuva duritada banna nivaripa karuna sampanna
Sriramanana siri carana saranarige
Krura yamanu saranagalillave?||2||

Singana pegaleridavage kari bangaveke mattavage
Rangana krupeyullavage Bava bangagaletakkavage
Mangala mahima purandaravithala Su-
Bangana dayavondiddare salade||3||

3 thoughts on “Bandaddella barali govindana

Leave a comment